ಸ್ನಾತಕ ಪದವಿಯ ಅವಧಿ ಈಗಲೂ ಮೂರು ವರ್ಷ, ವಿದ್ಯಾರ್ಥಿಗಳಲ್ಲಿ ಗೊಂದಲ ಬೇಡ

ಸ್ನಾತಕ ಪದವಿಯ ಅವಧಿ ಈಗಲೂ ಮೂರು ವರ್ಷ, ವಿದ್ಯಾರ್ಥಿಗಳಲ್ಲಿ ಗೊಂದಲ ಬೇಡ

ಶಿವಮೊಗ್ಗ | 8 ಆಗಸ್ಟ್‌ 2022 | ಡಿಜಿ ಮಲೆನಾಡು.ಕಾಂ

ರಾಜ್ಯದಲ್ಲಿ ಸ್ನಾತಕ ಪದವಿ ಕೋರ್ಸ್ ಗಳು ಹಿಂದಿನಂತೆ ಈಗಲೂ ಮೂರು ವರ್ಷಗಳ ಅವಧಿ ಆಗಿರುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಸ್ಪಷ್ಟಪಡಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಹೊಸ ಶಿಕ್ಷಣ ನೀತಿ (ಎನ್ಇಪಿ) ಜಾರಿಗೊಂಡ ಬಳಿಕ ಬಿ.ಎ, ಬಿ.ಕಾಂ, ಬಿಎಸ್ಸಿ ಮತ್ತಿತರ ಸ್ನಾತಕ‌ ಪದವಿ ಕೋರ್ಸ್ ಗಳ ಅವಧಿ ನಾಲ್ಕು ವರ್ಷಗಳಿಗೆ ಹೆಚ್ಚಳವಾಗಿದೆ ಎಂದು ಕೆಲ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಮೂಡಿದೆ‌. ಆದರೆ ಇದು ತಪ್ಪು ತಿಳುವಳಿಕೆಯಾಗಿದೆ.

ಸ್ನಾತಕ ಪದವಿಗಳ ಅವಧಿ ಹಿಂದಿನಂತೆ ಈಗಲೂ ಕೂಡ ಮೂರು ವರ್ಷಗಳ ಅವಧಿ ಆಗಿರುತ್ತದೆ. ಪ್ರವೇಶಾತಿಯನ್ನು ದಂಡ ಶುಲ್ಕದೊಂದಿಗೆ ಆಗಸ್ಟ್ 20ರ ವರೆಗೆ ವಿಸ್ತರಿಸಲಾಗಿದೆ. ಗೊಂದಲಕ್ಕೆ ಒಳಗಾಗದೆ ಪ್ರವೇಶ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಶಿವಮೊಗ್ಗ, ಚಿಕ್ಕಮಗಳೂರು ಕಾಲೇಜುಗಳ ಪ್ರಾಂಶುಪಾಲರು ಈ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಹೆಲ್ಪ್ ಡೆಸ್ಕ್ ಪ್ರಾರಂಭಿಸಿದ್ದಾರೆ. ವಿದ್ಯಾರ್ಥಿಗಳು ನಿರಾತಂಕವಾಗಿ ಪ್ರವೇಶ ಪಡೆದುಕೊಳ್ಳಬಹುದು. ಗೊಂದಲವಿದ್ದಲ್ಲಿ‌ ಹೆಲ್ಪ್ ಡೆಸ್ಕ್ ಬಳಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಎನ್ಇಪಿಯಲ್ಲಿ ಹೊಸತೇನಿದೆ?: ಹೊಸ ಶಿಕ್ಷಣ ನೀತಿ ಅನ್ವಯ ಪಿಯುಸಿ ನಂತರ ಸ್ನಾತಕ ಪದವಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಅನಿವಾರ್ಯ ಕಾರಣಗಳಿಂದ ಮೊದಲ ವರ್ಷದ ಬಳಿಕ ಕಾಲೇಜು ತೊರೆದರೆ ಅಂತದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ನೀಡಲಾಗುವುದು. ಎರಡು ವರ್ಷ ಪೂರೈಸಿ ಶಿಕ್ಷಣ ಮೊಟಕುಗೊಳಿಸಿದರೆ ಯುಜಿ ಡಿಪ್ಲೊಮಾ ಸರ್ಟಿಫಿಕೇಟ್ ನೀಡಲಾಗುವುದು.

ಮೂರನೆಯ ವರ್ಷ ಪೂರೈಸುವ ವಿದ್ಯಾರ್ಥಿಗಳು ಹಿಂದಿನಂತೆ ಪದವಿ ಪ್ರಮಾಣ ಪತ್ರ ಸ್ವೀಕರಿಸಲಿದ್ದಾರೆ. ನಾಲ್ಕನೇ ವರ್ಷ ಹಾನರ್ಸ್ ಕೋರ್ಸ್ ಆಗಿದ್ದು, ಇದು ಕಡ್ಡಾಯ ಆಗಿರುವುದಿಲ್ಲ. ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿರುತ್ತದೆ. ನಾಲ್ಕು ವರ್ಷ ಪೂರೈಸಿ ಹಾನರ್ಸ್ ಪದವಿ ಪಡೆಯುವ ವಿದ್ಯಾರ್ಥಿಗಳು ಒಂದು ವರ್ಷದ ಸ್ನಾತಕೋತ್ತರ ಪದವಿ ಕೋರ್ಸ್ ಗೆ ಪ್ರವೇಶ ಪಡೆದುಕೊಳ್ಳಬಹುದು ಅಥವಾ ನೇರವಾಗಿ ಪಿಎಚ್ ಡಿಗೆ ಅರ್ಜಿ ಸಲ್ಲಿಸಬಹುದು.

ಮೂರು ವರ್ಷಗಳ ಪದವಿ ಪಡೆಯುವ ವಿದ್ಯಾರ್ಥಿಗಳು ಹಿಂದಿನಂತೆ ಎರಡು ವರ್ಷಗಳ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬಹುದು ಅಥವಾ ಪದವಿ ಆಧಾರಿತ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು. ಪ್ರಥಮ, ದ್ವಿತೀಯ ವರ್ಷ ಪೂರೈಸಿ ಕಾಲೇಜು ಬಿಟ್ಟ ವಿದ್ಯಾರ್ಥಿಗಳು ಮುಂದೆ ಅನುಕೂಲದ ಅವಧಿಯಲ್ಲಿ‌ ಯಾವುದೇ ಕಾಲೆಜಿನಲ್ಲಿ ಮತ್ತೆ ಪ್ರವೇಶ ಪಡೆದು ಪದವಿ ಪೂರೈಸಲು ಅವಕಾಶವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

digimalenadu

ಶಿವಮೊಗ್ಗ
error: Content is protected !!