ಸಾರ್ಥಕ ಬದುಕು ನಡೆಸುವುದು ಅತ್ಯಂತ ಮುಖ್ಯ
ಶಿವಮೊಗ್ಗ | 24 ಅಕ್ಟೋಬರ್ 2022 | ಡಿಜಿ ಮಲೆನಾಡು.ಕಾಂ
ನಾವು ಚರ್ಚೆ ಮಾಡಬೇಕಿರುವುದು ಸಾವಿನ ಬಗ್ಗೆ ಅಲ್ಲ. ಜನನ ಹಾಗೂ ಸಾವಿನ ಮಧ್ಯೆ ಬದುಕು ಎಂಬುದಿದೆ. ನಾವೆಲ್ಲರೂ ಜೀವಿತ ಅವಧಿಯಲ್ಲಿ ಉತ್ತಮ ಬದುಕು ಅನುಭವಿಸುವುದು ಕೂಡ ನಮ್ಮ ಕೈಯಲ್ಲೇ ಇದೆ ಎಂದು ನಾಡೋಜ ಡಾ. ಗೊ.ರು.ಚನ್ನಬಸಪ್ಪ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ವಿಚಾರ ಸಂಕಿರಣ ಹಾಗೂ ಶ್ರೀಮತಿ ಶಕುಂತಲ ಶ್ರೀ ಎಸ್.ರುದ್ರೇಗೌಡರ ದತ್ತಿ ಕಾರ್ಯಕ್ರಮದಲ್ಲಿ “ಮರಣವೇ ಮಹಾನವಮಿ” ವಿಷಯ ಕುರಿತು ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu
ಮಗು ಜನಿಸಿದಾಗ ಸಂತಸಪಡುವುದು, ವ್ಯಕ್ತಿಯೊಬ್ಬ ಸತ್ತಾಗ ಅನುಭವಿಸುವ ಸಂಕಟಕ್ಕೆ ಅರ್ಥವಿಲ್ಲ. ಏಕೆಂದರೆ ಅವೆರಡು ಜನಿಸಿದ ವ್ಯಕ್ತಿ, ಸತ್ತ ವ್ಯಕ್ತಿಗೆ ಅರಿವು ಆಗುವುದಿಲ್ಲ. ಆದರೆ ಸಾಯುವ ಮುನ್ನ ನಾವು ಸಾರ್ಥಕ ಬದುಕು ನಡೆಸುವುದು ಸಾಧ್ಯವಿದೆ. ಅದೇ ನಮ್ಮ ಚಿಂತನೆ ಆಗಬೇಕು. ವಿಶ್ವಾಸದಿಂದ ಜೀವನ ನಡೆಸಿದ ಬದುಕು ನಮ್ಮದಾಗಬೇಕು ಎಂದು ತಿಳಿಸಿದರು.
ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ ಮೂರು ದಿನದ ದತ್ತಿ ಉಪನ್ಯಾಸಗಳ ಮೂಲಕ ಜ್ಞಾನದಾಸೋಹ ಕಾರ್ಯ ಮಾಡಿದ್ದು, ಅತ್ಯಂತ ಅಭಿನಂದನೀಯ. ಶರಣ ತತ್ವವನ್ನು ಬದುಕಿನ ಉಸಿರಾಗಿಸಿಕೊಂಡ ಡಾ. ಗೊ.ರು.ಚನ್ನಬಸಪ್ಪ ಅವರ ಉಪನ್ಯಾಸ ಮಾರ್ಗದರ್ಶನವಾಗಿತ್ತು ಎಂದು ಹೇಳಿದರು.
ವಚನ ಸಾಹಿತ್ಯದ ಅಧ್ಯಯನ, ಅನುಸರಣೆ, ಅನುಭಾವದ ಬದುಕು ನಮ್ಮದಾಗಬೇಕು. ಇದೇ ಇಂದಿನ ಬದುಕಿಗೆ ಭರವಸೆ ಒದಗಿಸುತ್ತದೆ. ಪ್ರತಿಯೊಬ್ಬರು ವಚನ ಸಾಹಿತ್ಯದ ಮಹತ್ವ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಮನುಷ್ಯನ ನಿತ್ಯದ ಬದುಕಿನ ತಳಮಳಗಳಿಗೆ, ಭಾವನೆಗಳೇ ಬತ್ತಿ ಬರಡಾಗಿರುವ ಬದುಕಿಗೆ, ಯಾಂತ್ರಿಕವಾದ ಜೀವನಶೈಲಿಗೆ, ಭಯದ ಬದುಕನ್ನು ಹೋಗಲಾಡಿಸುವ, ಬದುಕಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಶರಣರ ವಚನ, ತತ್ವ, ಸಂದೇಶಗಳಿಂದ ಆಗುತ್ತದೆ. | ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬೆಕ್ಕಿನ ಕಲ್ಮಠ
ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಜನಿಸಿದ ನಂತರ ಸಾವು ಕೂಡ ನಿಶ್ಚಿತ. ಸಾವಿನ ನೆರಳಲ್ಲೇ ಬದುಕಿನ ಬೆಳಕನ್ನು ಕಂಡುಕೊಳ್ಳಬೇಕು. ಸಾವಿನ ಭಯಕ್ಕಿಂತ ಬದುಕಿನ ಕ್ಷಣಗಳ ಮಹತ್ವವನ್ನು ಅರಿತು ತೀವ್ರವಾಗಿ ಬದುಕಬೇಕು. ಪ್ರತಿ ಕ್ಷಣವು ಅಮೂಲ್ಯವಾದುದು ಎಂದು ಹೇಳಿದರು.
ಮನುಷ್ಯ ತನಗೆ ದೊರೆತಿರುವ ಆಯುಷ್ಯವನ್ನು ಅರ್ಥಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು. ಒರ್ವ ವ್ಯಕ್ತಿಯ ನಿಜವಾದ ಆಯುಷ್ಯ ಅವನು ಎಷ್ಟು ವರ್ಷ ಬದುಕಿದ್ದ ಎನ್ನುವುದಕ್ಕಿಂತ ಆತ ಸತ್ತ ನಂತರವು ಜನರು ಎಷ್ಟು ವರ್ಷ ನೆನಪಿಸಿಕೊಳ್ಳುತ್ತಾರೆ ಎಂಬುದನ್ನು ಅವಲಂಬಿಸುತ್ತದೆ ಎಂದು ತಿಳಿಸಿದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಕೈಗಾರಿಕೋದ್ಯಮಿ ಡಿ.ಎಸ್.ಚಂದ್ರಶೇಖರ್ ಮಾತನಾಡಿ, ಕೈಗಾರಿಕಾ ಮತ್ತು ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಿರುವ ಎಸ್.ರುದ್ರೇಗೌಡರ ಹೆಸರಿನಲ್ಲಿ ವಿಶೇಷ ದತ್ತಿ ನಿಧಿ ಸ್ಥಾಪಿಸಲಾಯಿತು. ಅವರ ಉತ್ತಮ ವ್ಯಕ್ತಿತ್ವ ಹಾಗೂ ಸಾಧನೆಯ ಹಾದಿ ಎಲ್ಲರಿಗೂ ಪ್ರೇರಣೆ ಎಂದು ಹೇಳಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕವು ಸಂಘಟನಾ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಹಿಂದೂಸ್ಥಾನಿ ಗಾಯಕ ಹೂಮಯೂನ್ ಹರ್ಲಾಪುರ ತಂಡದವರು ವಚನ ಗಾಯನ ನಡೆಸಿಕೊಟ್ಟರು. ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎನ್.ಮಹಾರುದ್ರ, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯೆ ಪ್ರೊ. ಕಿರಣ್ ದೇಸಾಯಿ, ಶಾಂತಮ್ಮ ಶಿವಣ್ಣಗೌಡರ್, ಚನ್ನಬಸಪ್ಪ ನ್ಯಾಮತಿ ಉಪಸ್ಥಿತರಿದ್ದರು.