ಶಿವಮೊಗ್ಗ ಜಿಲ್ಲೆಯ ಆರ್ಥಿಕ ವ್ಯವಸ್ಥೆ ಸದೃಢಗೊಳಿಸುವಲ್ಲಿ ಫೌಂಡ್ರಿ ಕ್ಷೇತ್ರದ ಕೊಡುಗೆ ಅಪಾರ

ಶಿವಮೊಗ್ಗ ಜಿಲ್ಲೆಯ ಆರ್ಥಿಕ ವ್ಯವಸ್ಥೆ ಸದೃಢಗೊಳಿಸುವಲ್ಲಿ ಫೌಂಡ್ರಿ ಕ್ಷೇತ್ರದ ಕೊಡುಗೆ ಅಪಾರ

ಶಿವಮೊಗ್ಗ | 12 ನವೆಂಬರ್ 2022 | ಡಿಜಿ ಮಲೆನಾಡು.ಕಾಂ

ಜಿಲ್ಲೆಯ ಆರ್ಥಿಕ ವ್ಯವಸ್ಥೆಗೆ ಕೈಗಾರಿಕಾ ಕ್ಷೇತ್ರದ ಕೊಡುಗೆ ಅಪಾರ. ಅದರಲ್ಲಿ ಶಿವಮೊಗ್ಗ ಜಿಲ್ಲೆಯ ಫೌಂಡ್ರಿ ಉದ್ಯಮವು ಪ್ರಮುಖ ಪಾತ್ರ ವಹಿಸಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ನಗರದ ರಾಯಲ್ ಆರ್ಕಿಡ್‌ನಲ್ಲಿ ಆಯೋಜಿಸಿದ್ದ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಶಿವಮೊಗ್ಗ ಘಟಕದ ದಶಮಾನೋತ್ಸವ ಕಾರ್ಯಕ್ರಮ ಹಾಗೂ ತಾಂತ್ರಿಕ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಶಿವಮೊಗ್ಗ ಜಿಲ್ಲೆಯ ಫೌಂಡ್ರಿ ಉದ್ಯಮವು ವಿಶ್ವದಲ್ಲೇ ಅತ್ಯಂತ ಪ್ರಖ್ಯಾತಿ ಗಳಿಸಿದ್ದು, ಶಿವಮೊಗ್ಗ ಫೌಂಡ್ರಿ ಉದ್ಯಮದ ಉತ್ಪನ್ನಗಳು ಗುಣಮಟ್ಟ, ವಿಶ್ವಾಸ ಹಾಗೂ ನಂಬಿಕೆ ಮೂಲಕ ವಿಶ್ವಾದ್ಯಂತ ಹೆಸರು ಗಳಿಸವೆ. ವಿದೇಶಗಳಿಗೆ ಫೌಂಡ್ರಿ ಉತ್ಪನ್ನಗಳ ರಫ್ತು ಕ್ಷೇತ್ರದಲ್ಲಿಯೂ ಶಿವಮೊಗ್ಗ ಮುಂಚೂಣಿಯಲ್ಲಿದೆ. ಮುಂದಿನ ವರ್ಷಗಳಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳಿಗೂ ಫೌಂಡ್ರಿ ಉತ್ಪನ್ನ ಶಿವಮೊಗ್ಗ ಜಿಲ್ಲೆಯಿಂದಲೇ ರಫ್ತು ಆಗುವಂತಾಗಬೇಕು ಎಂದು ತಿಳಿಸಿದರು.

ಹೊಸ ಹೊಸ ಆವಿಷ್ಕಾರ ಹಾಗೂ ತಂತ್ರಜ್ಞಾನದಲ್ಲಿ ಮಹತ್ತರ ಬದಲಾವಣೆ ಆಗುತ್ತಿದ್ದು, ಪ್ರಸ್ತುತ ಹಾಗೂ ಮುಂದಿನ ಪೀಳಿಗೆಯು ತಂತ್ರಜ್ಞಾನ ಹಾಗೂ ಹೊಸ ಆವಿಷ್ಕಾರಗಳ ಸದುಪಯೋಗಪಡಿಸಿಕೊಂಡು ವಿಶ್ವಮಟ್ಟದಲ್ಲಿ ಶಿವಮೊಗ್ಗದ ಫೌಂಡ್ರಿ ಕ್ಷೇತ್ರ ಬೆಳೆಯುವಂತೆ ಮುಂದುವರೆಸುವ ಜವಾಬ್ದಾರಿ ಇದೆ ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ವಿಷನ್‌ 2050 ಶಿವಮೊಗ್ಗ ಪರಿಕಲ್ಪನೆ ಬಗ್ಗೆ ಶಿವಮೊಗ್ಗದ ಕೈಗಾರಿಕಾ ಉದ್ಯಮಿಗಳು ಹಾಗೂ ಆಸಕ್ತರು ಯೋಜನೆ ರೂಪಿಸುತ್ತಿದ್ದು, ಶಿವಮೊಗ್ಗ ಜಿಲ್ಲೆಯು 2050ರ ವೇಳೆಗೆ ಆರೋಗ್ಯ, ಶಿಕ್ಷಣ, ಕೈಗಾರಿಕೆ, ಉದ್ದಿಮೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನದಲ್ಲಿ ಇರಬೇಕು. ಅದಕ್ಕೆ ಬೇಕಾದ ರೀತಿಯ ಸಿದ್ಧತೆ ಯೋಜನೆಗಳ ಅನುಷ್ಠಾನದ ಬಗ್ಗೆ ಈಗಿನಿಂದಲೇ ನಾವೆಲ್ಲರೂ ಪ್ರಯತ್ನಿಸಬೇಕಿದೆ. | ಎನ್.ಗೋಪಿನಾಥ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ

ಐಐಎಫ್ ದಕ್ಷಿಣ ವಲಯ ಚೇರ‍್ಮನ್ ಮುತ್ತುಕುಮಾರ್ ಮಾತನಾಡಿ, ಭಾರತ ದೇಶವು ಸಂಪನ್ಮೂಲ, ಮೂಲಸೌಕರ್ಯ ಹಾಗೂ ಹೂಡಿಕೆ ಸೇರಿದಂತೆ ಎಲ್ಲ ದೃಷ್ಠಿಯಿಂದಲೂ ಸದೃಢವಾಗಿದ್ದು, ದೇಶದ ಆರ್ಥಿಕ ವ್ಯವಸ್ಥೆ ಸದೃಢಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸುವ ಜತೆಯಲ್ಲಿ ವಿಶ್ವದ ಅಗತ್ಯತೆಗಳನ್ನು ಪೂರೈಸುವ ಶಕ್ತಿ ಸಾಮಾರ್ಥ್ಯ ಹೊಂದಿದೆ ಎಂದು ತಿಳಿಸಿದರು.

ಫೌಂಡ್ರಿ ಉದ್ಯಮವು ಉತ್ಪನ್ನ ಪ್ರಮಾಣವನ್ನು ಹೆಚ್ಚಿಸುವ ಹಾಗೂ ರಫ್ತು ಪ್ರಮಾಣ ಹೆಚ್ಚಿಸುವ ಬಗ್ಗೆ ಆಲೋಚನೆ ನಡೆಸಬೇಕಿದೆ. ಫೌಂಡ್ರಿ ಉತ್ಪನ್ನಗಳ ಉತ್ಪಾದನೆಯನ್ನು ದ್ವಿಗುಣ ಪ್ರಮಾಣದಲ್ಲಿ ಹೆಚ್ಚಿಸಬೇಕಿದೆ. ಇದಕ್ಕಾಗಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಉತ್ಪದನಾ ಸಾಮಾರ್ಥ್ಯ ವೃದ್ಧಿಸಿಕೊಳ್ಳುವ ಕ್ರಮಗಳನ್ನು ಅನುಸರಿಸಬೇಕಿದೆ ಎಂದರು.

ಐಐಎಫ್ ದಕ್ಷಿಣ ವಲಯ ಗೌರವ ಕಾರ್ಯದರ್ಶಿ ಡಿ.ಜಿ.ಬೆನಕಪ್ಪ ಮಾತನಾಡಿ, ಶಿವಮೊಗ್ಗ ಫೌಂಡ್ರಿ ಉದ್ಯಮ ಬೃಹತ್ ಆಗಿ ಬೆಳೆದಿದ್ದು, ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ (ಐಐಎಫ್) ಶಿವಮೊಗ್ಗ ಘಟಕ ಪ್ರಸ್ತುತ 120 ಸದಸ್ಯರು ಹಾಗೂ ಎರಡು ವಿದ್ಯಾರ್ಥಿ ವಿಭಾಗಗಳನ್ನು ಹೊಂದಿದೆ. ಹತ್ತು ವರ್ಷಗಳಲ್ಲಿ ಐಐಎಫ್ ಶಿವಮೊಗ್ಗ ಘಟಕವು ವೈವಿಧ್ಯ ಸಭೆ, ಉಪನ್ಯಾಸ, ಕಾರ್ಯಾಗಾರ, ಖರೀದಿಗಾರರು ಮತ್ತು ಮಾರಾಟಗಾರರ ಸಭೆ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದೆ ಎಂದು ಹೇಳಿದರು.

ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಶಿವಮೊಗ್ಗ ಘಟಕದ ದಶಮಾನೋತ್ಸವ ಕಾರ್ಯಕ್ರಮ ಪ್ರಯುಕ್ತ ವಿವಿಧ ವಿಷಯಗಳ ಬಗ್ಗೆ ತಾಂತ್ರಿಕ ಉಪನ್ಯಾಸ ನಡೆಯಿತು. ಐಐಎಫ್ ಖಜಾಂಚಿ ಎಸ್.ಕುಪ್ಪುಸ್ವಾಮಿ, ಐಐಎಫ್ ಉಪಾಧ್ಯಕ್ಷ ಡಿ.ಎಸ್.ಚಂದ್ರಶೇಖರ್, ಐಐಎಫ್ ದಕ್ಷಿಣ ವಲಯ ಗೌರವ ಕಾರ್ಯದರ್ಶಿ ಡಿ.ಜಿ.ಬೆನಕಪ್ಪ, ಐಐಎಫ್ ಶಿವಮೊಗ್ಗ ಘಟಕದ ಅಧ್ಯಕ್ಷ ಟಿ.ಎನ್.ಪರಮೇಶ್ವರ್, ಐಐಎಫ್ ಶಿವಮೊಗ್ಗ ಘಟಕದ ಗೌರವ ಕಾರ್ಯದರ್ಶಿ ಎಂ.ವಿ.ರಾಘವೇಂದ್ರ, ಖಜಾಂಚಿ ರಾಘವೇಂದ್ರ ಹೆಬ್ಬಾರ್, ಶ್ರೀನಿವಾಸಮೂರ್ತಿ, ಡಾ. ರಜನಿ ಪೈ ಮತ್ತಿತರರು ಉಪಸ್ಥಿತರಿದ್ದರು.

digimalenadu

ಶಿವಮೊಗ್ಗ
error: Content is protected !!