ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣ ಮುಖ್ಯ, ಸಮನ್ವಯ ಟ್ರಸ್ಟ್ “ಬಾರಿಸು ಕನ್ನಡ ಡಿಂಡಿಮವ” ಕಾರ್ಯಕ್ರಮ

ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣ ಮುಖ್ಯ, ಸಮನ್ವಯ ಟ್ರಸ್ಟ್ “ಬಾರಿಸು ಕನ್ನಡ ಡಿಂಡಿಮವ” ಕಾರ್ಯಕ್ರಮ

ಶಿವಮೊಗ್ಗ | 21 ನವೆಂಬರ್ 2022 | ಡಿಜಿ ಮಲೆನಾಡು.ಕಾಂ

ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣ ಹಾಗೂ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಮುಂದಾಗಬೇಕು ಎಂದು ಮೈಸೂರಿನ ಪರಮಪೂಜ್ಯ ಶ್ರೀ ಅರ್ಜುನ ಅವಧೂತ ಮಹಾರಾಜರು ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಗರದ ಕುವೆಂಪು ರಂಗಮಂದಿರದಲ್ಲಿ ಸಮನ್ವಯ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ “ಬಾರಿಸು ಕನ್ನಡ ಡಿಂಡಿಮವ” ಕನ್ನಡ ಚಿತ್ರಗೀತೆಗಳ ವಿಶೇಷ ನೃತ್ಯ ಗಾಯನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಪರಂಪರೆ ಇದ್ದು, ಕನ್ನಡ ಭಾಷೆಯನ್ನು ಹೆಚ್ಚು ಬಳಸಲು ಮುಂದಾಗಬೇಕು. ರಾಜ್ಯ ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳು ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಕನ್ನಡ ಶಾಲೆಗಳಿಗೆ ಸೇರಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.

ಪ್ರತಿಯೊಬ್ಬ ಕನ್ನಡಿಗರು ಆಲೋಚನೆ ಹಾಗೂ ಭಾವನೆಗಳನ್ನು ಅಭಿವ್ಯಕ್ತಗೊಳಿಸುವುದು ಕನ್ನಡದಲ್ಲಿಯೇ. ಆದರೆ ಇತ್ತೀಚೆಗೆ ಇಂಗ್ಲೀಷ್ ಭಾಷೆ ವ್ಯಾಮೋಹ ಹೆಚ್ಚುತ್ತಿದ್ದು, ಮನೆಗಳಲ್ಲಿಯು ಇಂಗ್ಲೀಷ್ ಭಾಷೆ ಬಳಸುತ್ತಿರುವುದನ್ನು ಕಾಣುತ್ತಿದ್ದೇವೆ. ಮನೆಗಳಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಬೇಕು. ಮಕ್ಕಳಿಗೆ ಕನ್ನಡ ಭಾಷೆಯ ಶ್ರೇಷ್ಠ ಪರಂಪರೆ ಹಾಗೂ ಇತಿಹಾಸದ ಅರಿವು ಮೂಡಿಸಬೇಕು ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಶೌರ್ಯ ಪ್ರಶಸ್ತಿ ವಿಜೇತೆ ಪ್ರಾರ್ಥನಾ “ಬಾರಿಸು ಕನ್ನಡ ಡಿಂಡಿಮವ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ನನ್ನ ಕೆಲಸ ಗುರುತಿಸಿ ಸನ್ಮಾನಿಸಿದ್ದರಿಂದ ರಾಜ್ಯಮಟ್ಟದಲ್ಲಿ ಹೆಸರು ಗಳಿಸುವಂತಾಯಿತು. ಸಮನ್ವಯ ಟ್ರಸ್ಟ್ ನನ್ನ ಸನ್ಮಾನಿಸುತ್ತಿರುವುದು ಮೊದಲ ಕಾರ್ಯಕ್ರಮ. ಇದು ಅತ್ಯಂತ ಖುಷಿಯ ಸಂಗತಿ ಎಂದು ಹೇಳಿದರು.

ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಮನ್ವಯ ಟ್ರಸ್ಟ್‌ ನಿಂದ ವೈವಿಧ್ಯ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದು, “ಬಾರಿಸು ಕನ್ನಡ ಡಿಂಡಿಮವ” ಕಾರ್ಯಕ್ರಮ ವಿಶೇಷತೆಗಳಿಂದ ಕೂಡಿರುವಂತೆ ರೂಪಿಸಲಾಗುತ್ತದೆ. ಸ್ಥಳೀಯ ಕಲಾವಿದರು, ಸಾಧಕರಿಗೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಸಮನ್ವಯ ಟ್ರಸ್ ನಿರಂತರವಾಗಿ ನಡೆಸುತ್ತಿದೆ ಎಂದು ತಿಳಿಸಿದರು.

ಕೆನರಾ ಬ್ಯಾಂಕ್ ಶಿವಮೊಗ್ಗ ಉಪ ಮಹಾಪ್ರಬಂಧಕ ಸಂದೀಪ್ ರಾವ್ ಮಾತನಾಡಿ, ಸಮನ್ವಯ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲೆ ದತ್ತು ತೆಗೆದುಕೊಂಡು ಸೇವೆ ಸಲ್ಲಿಸುತ್ತಿರುವುದು ಉತ್ತಮ ಕಾರ್ಯ. ಮುಂದಿನ ದಿನಗಳಲ್ಲಿ ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಕನ್ನಡ ನಾಡು ನುಡಿಗೆ ಸಂಬಂಧಿಸಿದ ಗೀತೆಗಳು, ಮಧುರ ಗೀತೆಗಳು, ಪುನೀತ್ ರಾಜ್ ಕುಮಾರ್ ಗೀತೆಗಳು, ಸ್ಫೂರ್ತಿದಾಯಕ ಗೀತೆಗಳು ಸೇರಿದಂತೆ ವಿಶೇಷ ಕನ್ನಡ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಇಡೀ ಕುವೆಂಪು ರಂಗಮಂದಿರ ಭರ್ತಿಯಾಗಿತ್ತು. ಸಮನ್ವಯ ಟ್ರಸ್ಟ್ ವತಿಯಿಂದ ದತ್ತು ಸ್ವೀಕರಿಸಿರುವ ಒಡ್ಡಿನಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೌಶಲ್ಯ ಶಾಲೆ ವಿದ್ಯಾರ್ಥಿಗಳು ಹಾಗೂ ಸಮನ್ವಯ ಸೇವಕರು ನೃತ್ಯ ಗಾಯನ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.

ಅಮೃತ್ ನೋನಿ ಸಂಸ್ಥೆಯ ಶಶಿಕಾಂತ್ ನಾಡಿಗ್, ಕೆ ಲೈವ್ ಸಂಸ್ಥೆಯ ಸುಧೀಂದ್ರ ಹಾಗೂ ಸಮನ್ವಯ ಟ್ರಸ್ಟ್ ಸ್ವಯಂ ಸೇವಕರು ಉಪಸ್ಥಿತರಿದ್ದರು.

digimalenadu

ಶಿವಮೊಗ್ಗ
error: Content is protected !!