ಶಿವಮೊಗ್ಗ ಪ್ರವಾಸೋದ್ಯಮ ಪ್ರೋತ್ಸಾಹಿಸಲು ಸಂಪೂರ್ಣ ಸಹಕಾರ

ಶಿವಮೊಗ್ಗ ಪ್ರವಾಸೋದ್ಯಮ ಪ್ರೋತ್ಸಾಹಿಸಲು ಸಂಪೂರ್ಣ ಸಹಕಾರ

ಶಿವಮೊಗ್ಗ | 26 ನವೆಂಬರ್ 2022 | ಡಿಜಿ ಮಲೆನಾಡು.ಕಾಂ

ಗೋವಾ ಮತ್ತು ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಗೋವಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರಾಲ್ಫ್ ಡಿ ಸೋಜಾ ಹೇಳಿದರು.‌

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿಯೋಗದೊಂದಿಗೆ ಗೋವಾ ರಾಜ್ಯದ, ಗೋವಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳೊಂದಿಗೆ ಆಯೋಜಿಸಿದ್ದ ವಿಶೇಷ ಸಂವಾದ ಹಾಗೂ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಗೋವಾ ವಾಣಿಜ್ಯ ಸಂಘವು 114 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಗೋವಾ ರಾಜ್ಯದಲ್ಲಿನ ಉದ್ಯಮಿಗಳು ಹಾಗೂ ಕೈಗಾರಿಕಾ ಸಂಘದ ಪ್ರತಿನಿಧಿಗಳು ಸರ್ಕಾರದ ಹಂತದಲ್ಲಿ ನಾಮನಿರ್ದೇಶಿತರಾಗಿ ಗೋವಾ ರಾಜ್ಯದ ಆರ್ಥಿಕ ಪ್ರಗತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಆಶಯಕ್ಕೆ ಪೂರಕವಾಗಿ ಉದ್ಯಮಿಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಎಲ್ಲ ರೀತಿಯಲ್ಲಿ ಸಹಕಾರ ನೀಡುತ್ತಿದ್ದೇವೆ. ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಚಟುವಟಿಕೆಗಳನ್ನು ನಡೆಸಲು ಸಿದ್ಧರಿದ್ದೇವೆ ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿದ್ದು, ಟೂರಿಸಂ ಸರ್ಕ್ಯೂಟ್ ರೂಪಿಸುವ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ ಲೋಕಸಭೆ ಸದಸ್ಯರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಟೂರಿಸಂ ಹಬ್ ಆಗಿ ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಮೊಟ್ಟ ಮೊದಲ ಬಾರಿಗೆ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು, ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ (FICCI) ಜತೆಗೂಡಿ, ಕೌಟುಂಬಿಕ ವ್ಯವಹಾರ ಸಮ್ಮೇಳನ ( ಫ್ಯಾಮಿಲಿ ಬಿಸಿನೆಸ್ ಸಮ್ಮಿಟ್ ) ನಡೆಸಿದ್ದು, ಅಂತರಾಜ್ಯ, ಗೋವಾ ಜತೆಯು ವಿಶೇಷ ಒಪ್ಪಂದ ಹಾಗೂ ಒಡಂಬಡಿಕೆಗಳನ್ನು ಮಾಡಿಕೊಳ್ಳಲು ಮುಂದಾಗಿದೆ. ದ್ವಿಪಕ್ಷೀಯ ಚಟುವಟಿಕೆ ರೂಪದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಗೋವಾ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ಅದೇ ರೀತಿಯಲ್ಲಿ ಶಿವಮೊಗ್ಗ ಸ್ಥಳೀಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಗೋವಾ ರಾಜ್ಯದಲ್ಲಿ ಆಯೋಜಿಸಲು ಮುಂದಿನ ದಿನಗಳಲ್ಲಿ ಆಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.

ತಾಲೂಕು ಕೇಂದ್ರಗಳಲ್ಲಿಯು ವಾಣಿಜ್ಯ ಮತ್ತು ಕೈಗಾರಿಕೆಗೆ ಪ್ರೋತ್ಸಾಹಿಸುವ ದೃಷ್ಠಿಯಿಂದ ಜಿಲ್ಲಾ ಸಂಘವು ಸಕಲ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಜನಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಪ್ರವಾಸೋದ್ಯಮದ ಬಗ್ಗೆ ರೋಡ್ ಶೋ ನಡೆಸುವ ಆಲೋಚನೆ ಇದೆ ಎಂದು ವಿವರಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಮಾಜಿ ಅಧ್ಯಕ್ಷರಾದ ಡಿ.ಎಂ.ಶಂಕರಪ್ಪ, ಜೆ.ಆರ್.ವಾಸುದೇವ್, ನಿರ್ದೇಶಕರಾದ ಎಂ.ರಾಜು, ಸುಕುಮಾರ್, ಜಗದೀಶ್ ಮಾತನವರ್, ಗಣೇಶ್ ಎಂ.ಅಂಗಡಿ, ಪ್ರದೀಪ್ ಎಲಿ, ಮರಿಸ್ವಾಮಿ, ಮಂಜೇಗೌಡ, ಪರಮೇಶ್ವರ್, ರಮೇಶ್ ಹೆಗ್ಡೆ, ಗೋವಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷೆ ಪ್ರತಿಮಾ ದೋಂದ್, ಖಜಾಂಚಿ ಚಂದ್ರಕಾಂತ್, ನಿರ್ದೇಶಕ ಸೋಹನ್ ಪ್ರಭು, ಕಿರಣ್ ಮತ್ತಿತರರು ಭಾಗವಹಿಸಿದ್ದರು.

digimalenadu

ಶಿವಮೊಗ್ಗ
error: Content is protected !!