ಸಾಗರದ ಶ್ರೀ ಮಾರಿಕಾಂಬ ಜಾತ್ರೆಯ ಧಾರ್ಮಿಕ ಪೂಜೆ ಭಾನುವಾರ ಆರಂಭ
ಸಾಗರ | 4 ಫೆಬ್ರವರಿ 2023 | ಡಿಜಿ ಮಲೆನಾಡು.ಕಾಂ
ಪ್ರತಿ ಮೂರು ವರ್ಷಗಳಿಗೊಮ್ಮೆ ಸಾಗರದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆ ಫೆ. 7 ರಿಂದ ಆರಂಭಗೊಳ್ಳಲಿದ್ದು, 9 ದಿನಗಳ ಕಾಲ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯದ ಅತಿದೊಡ್ಡ ಜಾತ್ರಾ ಉತ್ಸವ ಆಗಿದ್ದು, ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಶ್ರೀ ಮಾರಿಕಾಂಬಾ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿಯು ಸಕಲ ಸಿದ್ಧತೆ ನಡೆಸಿದೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಜಾತ್ರಾ ಸಂದರ್ಭದಲ್ಲಿ ಶ್ರೀ ದೇವಿಯ ಸನ್ನಿಧಿಯಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ಜರುಗಲಿದ್ದು, ಫೆಬ್ರವರಿ 5ರಂದು ಬೆಳಗ್ಗೆ 10ಕ್ಕೆ ಶ್ರೀ ದೇವಿಗೆ ಸೀರೆ ತರುವುದು, ಬಾಸಿಂಗ ತರುವುದು, ಜಡೆ ತರುವುದು, ಆಭರಣ ತರುವ ಕಾರ್ಯಕ್ರಮವನ್ನು ಬಾಗಿನ ತೆಗೆದುಕೊಂಡು ಹೋಗುವ ಮೂಲಕ ನಡೆಸಲಾಗುತ್ತದೆ. ಫೆಬ್ರವರಿ 6ರಂದು ರಾತ್ರಿ 10ರಿಂದ ಮರುದಿನ ಬೆಳಗಿನ ಜಾವ 5 ಗಂಟೆವರೆಗೂ ಚಿಕ್ಕಮ್ಮನನ್ನು ಹೊರಡಿಸುವ ಕಾರ್ಯಕ್ರಮ ನಡೆಯಲಿದೆ.
ಫೆಬ್ರವರಿ 7ರ ಬೆಳಗ್ಗೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ದೇವಿಯ ಮಾಗಲ್ಯ ಪೂಜೆ ಮಾಡಿಸಿ ತವರು ಮನೆ ದೇವಸ್ಥಾನಕ್ಕೆ ತರಲಾಗುತ್ತದೆ. ಬೆಳಗ್ಗೆ 5ಕ್ಕೆ ಬ್ರಾಹ್ಮೀ ಮಹೂರ್ತದಲ್ಲಿ ಶ್ರೀ ದೇವಿಗೆ ದೃಷ್ಠಿ ಇಡುವುದು, ಮಾಂಗಲ್ಯ ಧಾರಣೆ ಮತ್ತು ಶ್ರೀ ಮಾರಿಕಾಂಬ ದೇವಿಯ ಪ್ರತಿಷ್ಠಾಪನೆ ಜರುಗಲಿದೆ. ನಂತರ ಮಹಾಪೂಜೆ ನಡೆಯಲಿದೆ.
ಫೆಬ್ರವರಿ 7ರ ರಾತ್ರಿ 10ಕ್ಕೆ ಶ್ರೀ ಪೋತರಾಜನಿಂದ ಚಾಟಿ ಸೇವೆ ನಂತರ ಹೆಣ್ಣು ಒಪ್ಪಿಸುವ ಕಾರ್ಯಕ್ರಮ ನಡೆಯಲಿದೆ. ಶ್ರೀ ದೇವಿಯ ದಂಡಿನ ಮೆರವಣಿಗೆ ಪ್ರಸಿದ್ಧ ಜಾನಪದ ಕಲಾತಂಡದೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ. ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.
ಫೆಬ್ರವರಿ 8ರ ಬೆಳಗ್ಗೆ ಶ್ರೀ ಮಾರಿಕಾಂಬ ದೇವಿಯ ಗಂಡನ ಮನೆ ದೇವಸ್ಥಾನದಲ್ಲಿ ಶ್ರೀ ದೇವಿಯ ಮೂರ್ತಿ ಕೂರಿಸಲಾಗುತ್ತದೆ. ಫೆಬ್ರವರಿ 15ರವರೆಗೂ ಸಾರ್ವಜನಿಕರ ದರ್ಶನಕ್ಕೆ ಸಕಲ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಜಾತ್ರಾ ಸಮಿತಿಯು ಎಲ್ಲ ರೀತಿ ಪೂಜೆಗಳಿಗೆ ಅನುಕೂಲವಾಗುವಂತೆ ಕ್ರಮ ವಹಿಸಿದೆ.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ದೇವಿಯ ಹರಕೆ ಸಲ್ಲಿಸಲು ವಿಶೇಷ ಸೇವೆ, ಉಡಿ ಸೇವೆ, ಪಂಚಕಜ್ಜಾಯ ಪ್ರಸಾದ, ದೇವಿಗೆ ಹೂವಿನ ಅಲಂಕಾರ ಸೇವೆ, ತುಲಾಭಾರ ಸೇರಿದಂತೆ ವಿವಿಧ ಸೇವೆ ಸಲ್ಲಿಸಲು ಅವಕಾಶವಿದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಜಾತ್ರಾ ಸಮಿತಿ ವತಿಯಿಂದ ಮಧ್ಯಾಹ್ನ ಮತ್ತು ರಾತ್ರಿ ಪ್ರಸಾದ ವ್ಯವಸ್ಥೆ ಇರುತ್ತದೆ. ಸ್ಥಳೀಯ ಸಂಘ ಸಂಸ್ಥೆಗಳು ಸಹ ಉಚಿತವಾಗಿ ಪಾನೀಯ, ಉಪಾಹಾರ ಹಾಗೂ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿರುತ್ತವೆ.
ಫೆಬ್ರವರಿ 7ರಿಂದ 15ರವರೆಗೂ ಪ್ರತಿ ದಿನ ಬೆಳಗ್ಗೆ 8 ಗಂಟೆಯಿಂದ ಮಹಾಮಂಗಳಾರತಿ, ರಾತ್ರಿ 9.30ರವರೆಗೆ ಶ್ರೀ ದೇವಿಗೆ ಪೂಜಾ ಕಾರ್ಯಕ್ರಮ, ಪ್ರಸಾದ ವಿನಿಯೋಗ ಇರುತ್ತದೆ. ಶ್ರೀ ಮಾರಿಕಾಂಬ ಕಲಾ ವೇದಿಕೆ ( ಗಂಡನ ಮನೆ ) ಯಲ್ಲಿ ಪ್ರತಿ ದಿನ ಸಂಜೆ 5.30ರಿಂದ ವಿವಿಧ ಸಂಘಟನೆಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ವಿವಿಧ ಭಜನಾ ತಂಡಗಳು ಪಾಲ್ಗೊಳ್ಳಲಿವೆ.
ಒಂಬತ್ತು ದಿನಗಳ ವೈವಿಧ್ಯಮಯ ಪೂಜಾ ವಿಧಾನಗಳ ನಂತರ ಫೆಬ್ರವರಿ 15ರ ರಾತ್ರಿ 10.30ಕ್ಕೆ ಅಮ್ಮನವರಿಗೆ ಚಾಟಿಸೇವೆ, ಅಮ್ಮನವರಿಗೆ ನೈವೇದ್ಯ ಮಹಾಪ್ರಸಾದ ವಿನಿಯೋಗ, ನಂತರ ರಾತ್ರಿ 12ರಿಂದ ಬೆಳಗ್ಗೆ 5ರವರೆಗೂ ಪ್ರಸಿದ್ಧ ಜಾನಪದ ಕಲಾತಂಡಗಳೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ. ಶ್ರೀ ಮಾರಿಕಾಂಬ ದೇವಿಯನ್ನು ವನಕ್ಕೆ ಬಿಟ್ಟುಬರುವ ಮೂಲಕ ಜಾತ್ರೆಯು ಸಂಪನ್ನಗೊಳ್ಳಲಿದೆ.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu