ಇ ತ್ಯಾಜ್ಯದ ಮರು ಬಳಕೆ, ಮರು ಉಪಯೋಗದ ಚಿಂತನೆಯತ್ತ ಗಮನ ಮುಖ್ಯ
ಶಿವಮೊಗ್ಗ | 14 ಅಕ್ಟೋಬರ್ 2022 | ಡಿಜಿ ಮಲೆನಾಡು.ಕಾಂ
ಎರಡು ದಶಕಗಳಲ್ಲಿ ಇಲೆಕ್ಟ್ರಾನಿಕ್ ವಸ್ತುಗಳ ಬಳಕೆ ಹೆಚ್ಚಿದ್ದು, ಅದೇ ರೀತಿಯಲ್ಲಿ ತ್ಯಾಜ್ಯ ಕೂಡ ಅಧಿಕವಾಗಿದೆ. ದಿನನಿತ್ಯ ಉತ್ಪತ್ತಿ ಆಗುವ ಇ ತ್ಯಾಜ್ಯ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಆಗುತ್ತಿಲ್ಲ. ಇದರಿಂದ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu
ಅಂತರಾಷ್ಟ್ರೀಯ ಇ ತ್ಯಾಜ್ಯ ದಿನದ ಪ್ರಯುಕ್ತ ಶಿವಮೊಗ್ಗ ನಗರದ ಎಟಿಎನ್‌ಸಿಸಿ ಕಾಲೇಜಿನ ಚಂದನ ಸಭಾಂಗಣದಲ್ಲಿ ಆಯೋಜಿಸಿದ್ದ “ಇ ತ್ಯಾಜ್ಯ ಅರಿವು ಮತ್ತು ವಿಲೇವಾರಿ ಅಭಿಯಾನ” ಉದ್ಘಾಟಿಸಿ ಮಾತನಾಡಿದರು.
ಇ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಮಾಡುವುದು ಪ್ರಸ್ತುತ ಅತ್ಯಂತ ಅವಶ್ಯಕ. ಇ ತ್ಯಾಜ್ಯವನ್ನು ಮರು ಬಳಕೆ ಮತ್ತು ಮರು ಉಪಯೋಗ ಮಾಡಬಹುದಾಗಿದೆ. ಬೆಂಗಳೂರು ನಗರದಲ್ಲಿ ಇ ತ್ಯಾಜ್ಯ ವಿಲೇವಾರಿ ಸಂಸ್ಥೆಗಳು ಆರಂಭವಾಗುತ್ತಿವೆ. ಶಿವಮೊಗ್ಗ ಜಿಲ್ಲೆಯಲ್ಲೂ ಇ ತ್ಯಾಜ್ಯದ ಸಮರ್ಪಕ ವೈಜ್ಞಾನಿಕ ವಿಲೇವಾರಿ ಬಗ್ಗೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಮಾತನಾಡಿ, ನಗರದ ಸ್ವಚ್ಚತೆ ಕಾಪಾಡುವ ದೃಷ್ಟಿಯಿಂದ ಪಾಲಿಕೆ ವತಿಯಿಂದ ಎಲ್ಲ ರೀತಿ ಕ್ರಮ ವಹಿಸಲಾಗುತ್ತಿದೆ. ಅದರ ಜತೆಯಲ್ಲಿ ಸಾರ್ವಜನಿಕರ ಪಾತ್ರವು ಬಹಳ ಮುಖ್ಯ. ಇ ತ್ಯಾಜ್ಯ ವಿಲೇವಾರಿ ಬಗ್ಗೆಯೂ ಪಾಲಿಕೆ ಜಿಲ್ಲಾಡಳಿತದ ಸಹಕಾರದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ಮಾತನಾಡಿ, ದಿನ ನಿತ್ಯ ಇಲೆಕ್ಟ್ರಾನಿಕ್ ವಸ್ತುಗಳ ಬಳಕೆ ಹೆಚ್ಚುತ್ತಿದ್ದು, ಪ್ರತಿ ವರ್ಷ ತ್ಯಾಜ್ಯ ಉತ್ಪತ್ತಿ ಅಧಿಕವಾಗುತ್ತಿದೆ. ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿ ಇಡೀ ವಿಶ್ವವನ್ನು ಕಾಡಲಿದೆ. ಇ ತ್ಯಾಜ್ಯದ ಅರಿವು ಮತ್ತು ವಿಲೇವಾರಿ ಬಗ್ಗೆ ಸಮಾಜದ ಪ್ರತಿಯೊಬ್ಬರು ಗಮನ ವಹಿಸಬೇಕಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ನಾರಾಯಣರಾವ್ ಮಾತನಾಡಿ, ಪರಿಸರ ಸಂರಕ್ಷಣೆ ಹಾಗೂ ಉತ್ತಮ ವಾತಾವರಣ ಕಾಪಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಆಗಿದೆ. ಪರಿಸರ ಮಾಲಿನ್ಯ ಆಗುವುದನ್ನು ತಪ್ಪಿಸಬೇಕು. ಪರಿಸರ ಸಂರಕ್ಷಣೆ ಸಮಾಜದ ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಸರ್ಜಿ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ ಮಾತನಾಡಿ, ಮಣ್ಣು, ನೀರು, ಗಾಳಿ ಸೇರಿದಂತೆ ಪರಿಸರದಲ್ಲಿ ರಾಸಾಯನಿಕ ಮಿಶ್ರಿತ ಆಗುತ್ತಿರುವ ವಾತಾವರಣ ನಾವೆಲ್ಲರೂ ನೋಡುತ್ತಿದ್ದೇವೆ. ರಾಸಾಯನಿಕ ಮಿಶ್ರಿತ ವಾತಾವರಣದಿಂದ ಎಲ್ಲರ ಆರೊಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಮೂಲಕ ಆರೋಗ್ಯಕರ ಪರಿಸರ ನಿರ್ಮಿಸಬೇಕಿದೆ ಎಂದು ಹೇಳಿದರು.
ಇ ತ್ಯಾಜ್ಯದ ಅರಿವು ಮತ್ತು ವಿಲೇವಾರಿ ಬಗ್ಗೆ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿನ ಹಂತದಿಂದ ಜಾಗೃತಿ ಮೂಡಿಸಬೇಕು. ಇದರಿಂದ ಮುಂದಿನ ವರ್ಷಗಳಲ್ಲಿ ಉತ್ಪತ್ತಿ ಆಗಬಹುದಾದ ತ್ಯಾಜ್ಯ ತಡೆಗಟ್ಟಬಹುದು ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಟಿ.ಆರ್.ಅಶ್ವಥನಾರಾಯಣ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್ ಕುಮಾರ್, ಗಣೇಶ್ ಅಂಗಡಿ, ಪ್ರದೀಪ್ ಎಲಿ, ಐ ಸೆವೆನ್ ವೇಣುಗೋಪಾಲ್, ಜಿ.ವಿ.ರವೀಂದ್ರ, ಪ್ರಾದೇಶಿಕ ಪರಿಸರ ಅಧಿಕಾರಿ ಶಿಲ್ಪಾ, ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ, ಪರಿಸರ ಅಧ್ಯಯನ ಕೇಂದ್ರ ನಿರ್ದೇಶಕ ಜನಾರ್ಧನ್, ಡೂ ಮೈಂಡ್ಸ್ ಡಿಸೈನ್ ಲ್ಯಾಬ್ ವೆಂಕಟೇಶ್, ನವೀನ್, ರಮೇಶ್ ಹೆಗ್ಡೆ ಉಪಸ್ಥಿತರಿದ್ದರು.
ವಿವಿಧ ಸಂಘ ಸಂಸ್ಥೆಗಳ ಸಹಕಾರ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಡೂ ಮೈಂಡ್ಸ್ ಡಿಸೈನ್ ಲ್ಯಾಬ್, ಪರಿಸರ ಅಧ್ಯಯನ ಕೇಂದ್ರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಅಭಿಯಾನ ನಡೆಯಿತು. ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಸರ್ಜಿ ಫೌಂಡೇಷನ್, ಐ ಸೆವೆನ್, ರೇಡಿಯೋ ಶಿವಮೊಗ್ಗ, ಶಿವಮೊಗ್ಗ ಐಟಿ ಅಸೋಸಿಯೇಷನ್, ರಾಷ್ಟ್ರೀಯ ಶಿಕ್ಷಣ ಸಮಿತಿ, ನಡಿಗೆ ಶಿಕ್ಷಣ ಪ್ರತಿಷ್ಠಾನ, ರೋಟರಿ, ಜೆಸಿಐ ಹಾಗೂ ಇತರ ಸಂಸ್ಥೆಗಳು ಸಹಕಾರ ನೀಡಿದವು.