ನೃತ್ಯ ಸಂಗೀತ ಪರಂಪರೆಯು ಜ್ಞಾನ ವೃದ್ಧಿಸಲು ಸಹಕಾರಿ
ಶಿವಮೊಗ್ಗ | 28 ನವೆಂಬರ್ 2022 | ಡಿಜಿ ಮಲೆನಾಡು.ಕಾಂ
ಕಲೆ, ನೃತ್ಯ, ಸಂಗೀತ, ಸಾಹಿತ್ಯ ಸಾಂಸ್ಕೃತಿಕ ಪರಂಪರೆಯು ಎಲ್ಲರ ಜ್ಞಾನ ವಿಸ್ತಾರಕ್ಕೂ ಸಹಕಾರಿ ಆಗುತ್ತದೆ. ನೃತ್ಯದ ಮೂಲಕ ಐತಿಹಾಸಿಕ ಪರಂಪರೆಯ ಸಂಗತಿಗಳನ್ನು ಪ್ರತಿಯೊಬ್ಬರಿಗೂ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಮೇಶ್ ಹಾಲಾಡಿ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu
ಇಂಟರ್ ನ್ಯಾಷನಲ್ ಆರ್ಟ್ಸ್ ಅಂಡ್ ಕಲ್ಚರಲ್ ಫೌಂಡೇಷನ್ ಸಂಸ್ಥೆಯ ದಶಮಾನೋತ್ಸವ ಪ್ರಯುಕ್ತ ನಗರದ ಕುವೆಂಪು ರಂಗಮಂದಿರದಲ್ಲಿ “ಅಮೃತ್ ಕಲಾ ಮಹೋತ್ಸವ” ಶೀರ್ಷಿಕೆಯಡಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಗಿ ಭಾಗವಹಿಸಿ ಮಾತನಾಡಿದರು.
ನೃತ್ಯ ಪ್ರಕಾರದ ಮೂಲಕ ಮನರಂಜನೆ ಜತೆಯಲ್ಲಿ ಸಂದೇಶಗಳನ್ನು ಜನರ ಮನಸ್ಸಿಗೆ ತಲುಪಿಸಲು ಸಾಧ್ಯವಿದೆ. ಶೈಕ್ಷಣಿಕ ಸಂಗತಿಗಳನ್ನು ಮನಮುಟ್ಟುವ ರೀತಿಯಲ್ಲಿ ಅರಿವು ಮೂಡಿಸಬಹುದಾಗಿದೆ. ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆಗಳು ಅತ್ಯಂತ ಅಗತ್ಯ. ಇಂತಹ ವೇದಿಕೆಗಳನ್ನು ಪ್ರತಿಭಾವಂತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಇಂಟರ್ ನ್ಯಾಷನಲ್ ಆರ್ಟ್ಸ್ ಅಂಡ್ ಕಲ್ಚರಲ್ ಫೌಂಡೇಷನ್ ಸಂಸ್ಥೆಯ ನಿರ್ದೇಶಕ ಶ್ರೀವತ್ಸ ಶಾಂಡಿಲ್ಯ ಮಾತನಾಡಿ, ಕರ್ನಾಟಕ ರಾಜ್ಯದ ವೀರಮಹಿಳೆಯರ ಸಾಹಸ ಕಥನವನ್ನು ಮನಮುಟ್ಟುವ ರೀತಿಯಲ್ಲಿ ದೇಶಾದ್ಯಂತ ಪ್ರಸ್ತುತಪಡಿಸಲಾಗುತ್ತಿದೆ. ಕಲೆಯು ಮಾಹಿತಿ ಕಥನಗಳ ಜ್ಞಾನ ಸಂವಹನ ಮಾರ್ಗ ಆಗಿದೆ ಎಂದು ಹೇಳಿದರು.
ನಮ್ಮ ಸಂಸ್ಥೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೃತ್ಯ ಕಾರ್ಯಕ್ರಮ ಆಯೋಜಿಸಿ ಸ್ಥಳೀಯವಾಗಿರುವ ವಿವಿಧ ನೃತ್ಯತಂಡಗಳನ್ನು ಒಂದೇ ವೇದಿಕೆಯಲ್ಲಿ ತರುವ ಕೆಲಸ ಮಾಡುತ್ತಿದೆ. ವೈವಿಧ್ಯ ಕಲಾತಂಡಗಳ ಪ್ರತಿಭಾವಂತರ ನೃತ್ಯ ಪ್ರದರ್ಶನ ವಿಶೇಷತೆಯಿಂದ ಕೂಡಿರುವಂತೆ ಆಯೋಜಿಸಲಾಗುತ್ತದೆ. ಇಲ್ಲಿಯೂ ಅತ್ಯಂತ ಯಶಸ್ವಿಯಾಗಿ ನೃತ್ಯ ಕಾರ್ಯಕ್ರಮ ಮೂಡಿಬಂದಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಆಚರಣೆ ಅಮೃತ ಮಹೋತ್ಸವ ಪ್ರಯುಕ್ತ “ಆಜಾದಿ ಕಾ ಅಮೃತ ಮಹೋತ್ಸವ” ಕಾರ್ಯಕ್ರಮ ದೇಶದಾದ್ಯಂತ ವಿಶೇಷವಾಗಿ ಆಚರಿಸಲಾಗುತ್ತಿದೆ.
ಕರ್ನಾಟಕ ರಾಜ್ಯ ಕಂಡ ವೀರ ಮಹಿಳೆಯರು ರಾಣಿ ಅಬ್ಬಕ್ಕ, ರಾಣಿ ಕೆಳದಿ ಚೆನ್ನಮ್ಮ, ರಾಣಿ ಚೆನ್ನ ಬೈರಾದೇವಿ, ರಾಣಿ ಬೆಳವಡಿ ಮಲ್ಲಮ್ಮ ಅವರ ಸಾಹಸ ಕಥೆಗಳಿಗೆ ಭರತನಾಟ್ಯ ಶೈಲಿಯಲ್ಲಿ ಶಾಸ್ತ್ರೀಯ ನೃತ್ಯವನ್ನು ಪೆರುಮಾಳ್ ನೃತ್ಯ ಕಲಾ ಕೇಂದ್ರದ ಗುರು ಸುಪ್ರಿಯಾ ಪೊದುವಾಳ್ ತಂಡ, ಸಹಚೇತನ ನಾಟ್ಯಾಲಯದ ಗುರು ಸಹನಾ ಚೇತನ್ ತಂಡ, ಶ್ರೀ ವಿಜಯ ಕಲಾನಿಕೇತನದ ಗುರು ಡಾ.ಕೆ.ಎಸ್.ಪವಿತ್ರ ಮತ್ತು ಡಾ.ಕೆ.ಎಸ್.ಶುಭ್ರತ ತಂಡ, ಪುಷ್ಪಾ ಪರ್ಫಾಮಿಂಗ್ ಆರ್ಟ್ ಸೆಂಟರ್ ನ ಗುರು ಪುಷ್ಪ ಕೃಷ್ಣಮೂರ್ತಿ ತಂಡ, ಸಾಗರ ಹೆಗ್ಗೋಡು ಮಹಿಳಾ ಡೊಳ್ಳು ಕಲಾತಂಡ, ಗ್ರಾಮೀಣ ಸೊಗಡಿನ ಕಲಾ ಪರಂಪರೆ ಪ್ರತಿಕ ಶ್ರೀ ಸಿಂಗದೂರು ಚೌಡೇಶ್ವರಿ ಮಹಿಳಾ ಡೊಳ್ಳು ಕಲಾತಂಡ ನೃತ್ಯ ಪ್ರದರ್ಶಿಸಿದವು. ಎಲ್ಲ ತಂಡಗಳ ಗುರುಗಳು ಹಾಗೂ ಕಲಾವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಭಾರತ ಸರ್ಕಾರ ಸಾಂಸ್ಕೃತಿಕ ಸಚಿವಾಲಯ ಹಾಗೂ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.