ಇತಿಹಾಸ ಪ್ರಸಿದ್ಧ ಸಾಗರ ಶ್ರೀ ಮಾರಿಕಾಂಬಾ ಜಾತ್ರೆಗೆ ತೆರೆ
ಶಿವಮೊಗ್ಗ | 16 ಫೆಬ್ರವರಿ 2023 | ಡಿಜಿ ಮಲೆನಾಡು.ಕಾಂ
ಮೂರು ವರ್ಷಕ್ಕೊಮ್ಮೆ ನಡೆಯುವ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆಗೆ ಬುಧವಾರ ತೆರೆಬಿದ್ದಿದೆ. ಒಂಬತ್ತು ದಿನಗಳ ನಡೆದ ವೈಭವಯುತ ಹಾಗೂ ಅದ್ಧೂರಿ ಜಾತ್ರೆಯಲ್ಲಿ ಲಕ್ಷಾಂತರ ಜನರು ಶ್ರೀದೇವಿಯ ದರ್ಶನ ಪಡೆದರು.
ಒಂಬತ್ತು ದಿನಗಳ ಕಾಲ ಪ್ರತಿ ದಿನ ಸಾವಿರಾರು ಜನರು ಸರತಿ ಸಾಲಿನಲ್ಲಿ ಶ್ರೀ ಮಾರಿಕಾಂಬೆಗೆ ಉಡಿ ಸಮರ್ಪಿಸಿ ಪೂಜೆ ಸಲ್ಲಿಸಿದರು. ದೇವರಿಗೆ ಕುಂಕುಮಾರ್ಚನೆ, ತುಲಾಭಾರ ಸೇರಿದಂತೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ವಿವಿಧ ಜಿಲ್ಲೆ, ರಾಜ್ಯಗಳಲ್ಲಿ ನೆಲೆಸಿರುವ ಸಾಗರದ ಜನತೆ ಶ್ರೀ ಮಾರಿಕಾಂಬಾ ಜಾತ್ರೆಗಾಗಿ ದೂರದ ಊರುಗಳಿಂದ ಆಗಮಿಸಿದ್ದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/shivamogganews ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಜಾತ್ರಾ ಸಂದರ್ಭದಲ್ಲಿ ಎಲ್ಲ ವ್ಯವಸ್ಥೆಗಳು ಅಚ್ಚುಕಟ್ಟಾಗಿ ನಡೆಯಲು ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿ ಮೊದಲ ದಿನದಿಂದಲೂ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿತ್ತು. ಜಾತ್ರೆಯ ಎಲ್ಲ ಪದಾಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಜಾತ್ರೆಯು ಅತ್ಯಂತ ಯಶಸ್ವಿಯಾಗಿ ಜರುಗಿತು.
ಒಂಬತ್ತು ದಿನಗಳ ಕಾಲ ಜಾತ್ರೆಯಲ್ಲಿ ಪ್ರತಿಯೊಂದು ವ್ಯವಸ್ಥೆ ನಿರ್ವಹಣೆಗಾಗಿ ಸಮಿತಿ ರಚಿಸಲಾಗಿತ್ತು. ಗೋಪುರ ಸಮಿತಿ, ಸಾಂಸ್ಕೃತಿಕ, ರಥೋತ್ಸವ, ಅಮ್ಮನ ಬಳಗ, ದಾಸೋಹ, ಪೆಂಡಾಲ್, ಹರಾಜು, ಕುಸ್ತಿ, ಪೂಜಾ ಸಮಿತಿ, ವಸ್ತು ಪ್ರದರ್ಶನ, ಸ್ಟೇಷನರಿ, ಕಾಣಿಕೆ, ಪ್ರಚಾರ, ಪ್ರಸಾದ, ಉಗ್ರಾಣ ಸಮಿತಿ ಹೀಗೆ ಹತ್ತು ಹಲವು ಸಮಿತಿಗಳನ್ನು ರಚಿಸಿ ವ್ಯವಸ್ಥಿತವಾಗಿ ನಿರ್ವಹಣೆ ನಡೆಸಲಾಯಿತು.
ವೈಶಿಷ್ಟ್ಯತೆಯಿಂದ ಕೂಡಿದ್ದ ಸಾಗರದ ಶ್ರೀ ಮಾರಿಕಾಂಬಾ ಮೂರ್ತಿಯ ದರ್ಶನಕ್ಕಾಗಿ ಜಾತ್ರೆಯ ಮೊದಲ ದಿನದಿಂದಲೇ ಸಾವಿರಾರು ಜನರು ಆಗಮಿಸುತ್ತಿದ್ದರು. ತವರು ಮನೆಯಲ್ಲಿ ಮೊದಲ ದಿನ ಪಡೆಯಲು ಕೀಮಿ ಉದ್ದದ ಸರತಿ ಸಾಲು ಬೆಳೆದಿತ್ತು. ರಾಜಬೀದಿ ಉತ್ಸವದ ಮೂಲಕ ಶ್ರೀ ಮಾರಿಕಾಂಬೆಯನ್ನು ಗಂಡನ ಮನೆಗೆ ಕರೆದೊಯ್ಯಲಾಯಿತು. ಎರಡನೇ ದಿನದಿಂದ ಒಂಬತ್ತನೇ ದಿನದವರೆಗೂ ದೇವಿಯನ್ನು ಗಂಡನ ಮನೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಪ್ರತಿ ದಿನವೂ ಸಾವಿರಾರು ಜನರು ದೇವರ ದರ್ಶನ ಪಡೆದು ಹರಕೆ ಸಲ್ಲಿಸಿದರು.
ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆಗೆ ಪ್ರತಿ ದಿನವೂ ಆಗಮಿಸುವ ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣದ ವೀರಶೈವ ಕಲ್ಯಾಣ ಮಂದಿರದಲ್ಲಿ ಒಂಬತ್ತು ದಿನಗಳ ಕಾಲ ಜನರಿಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ದಾಸೋಹ ವ್ಯವಸ್ಥೆಯು ಅತ್ಯಂತ ಅಚ್ಚುಕಟ್ಟಾಗಿ ಮಾಡಲಾಗಿತ್ತು.
ಪ್ರಸ್ತಕ ಸಾಲಿನ ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ಪ್ರತಿ ದಿನವೂ 8-10 ಸಾವಿರ ಜನರು ಅನ್ನ ದಾಸೋಹದಲ್ಲಿ ಊಟ ಮಾಡಿದ್ದು, ಒಟ್ಟಾರೆ ಒಂದು ಲಕ್ಷಕ್ಕೂ ಅಧಿಕ ಜನರು ಪ್ರಸಾದ ಸೇವಿಸಿದ್ದಾರೆ. ಇದರ ಜತೆಯಲ್ಲಿ ತವರುಮನೆ ಶ್ರೀ ಮಾರಿಕಾಂಬಾ ದೇವಸ್ಥಾನದ ಪಕ್ಕದ ವೃತ್ತದಲ್ಲಿ ಸ್ನೇಹಿತರು ಸಾಗರ ತಂಡದಿಂದಲೂ ಪ್ರತಿ ದಿನ ಮಧ್ಯಾಹ್ನ ಅನ್ನದಾಸೋಹ ವ್ಯವಸ್ಥೆ ಇತ್ತು. ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಅನ್ನ ಸಂತರ್ಪಣೆ ನಡೆಸಿದರು. ಪಾನೀಯ, ಕಲ್ಲಂಗಡಿ ಹಣ್ಣನ್ನು ಜನರಿಗೆ ನೀಡಿದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಜಾತ್ರೆಯ ಎರಡನೇ ದಿನದಿಂದ ಪ್ರತಿ ದಿನವೂ ನಗರಸಭೆ ಆವರಣದಲ್ಲಿ ನಿರ್ಮಿಸಿದ ಮಾರಿಕಾಂಬಾ ಕಲಾ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಥಳೀಯ ಮತ್ತು ರಾಜ್ಯದ ವಿವಿಧ ಜಿಲ್ಲೆಯ ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಅವಕಾಶ ನೀಡಲಾಗಿತ್ತು. ಸಮೂಹ ನೃತ್ಯ, ಸುಗಮ ಸಂಗೀತ, ಗಾಯನ, ಭರತನಾಟ್ಯ, ರಸಮಂಜರಿ, ಮಲ್ಲಗಂಬ ಪ್ರದರ್ಶನ, ತಬಲ ವಾದನ, ಸ್ಯಾಕ್ಸೋಫೋನ್, ವಿವಿಧ ವಾದ್ಯಗಳ ಫ್ಯೂಜನ್ ಕಾರ್ಯಕ್ರಮ ಸೇರಿದಂತೆ ವೈವಿಧ್ಯ ಕಾರ್ಯಕ್ರಮಗಳು ನಡೆದವು.
ಇದಲ್ಲದೇ ಸಾಗರ ಶ್ರೀ ಮಾರಿಕಾಂಬಾ ಜಾತ್ರಾ ಪ್ರಯುಕ್ತ ಆಯೋಜಿಸಿದ್ದ ಮೂರು ದಿನಗಳ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ರಾಜ್ಯ, ರಾಷ್ಟ್ರದ ವಿವಿಧ ಭಾಗಗಳಿಂದ ಘಟಾನುಘಟಿ ಕುಸ್ತಿಪಟುಗಳು ಆಗಮಿಸಿದ್ದರು. ರೋಚಕ ಹಣಾಹಣಿಯಿಂದ ಕೂಡಿದ್ದ ಪಂದ್ಯಗಳಿಗೆ ಸಾವಿರಾರು ಜನರು ಸಾಕ್ಷಿಯಾದರು.
ಬುಧವಾರ ರಾತ್ರಿ ಶ್ರೀ ಪೋತರಾಜನಿಂದ ಚಾಟಿ ಸೇವೆ, ಅಮ್ಮನವರಿಗೆ ನೈವೇದ್ಯ, ಮಹಾಪ್ರಸಾದ ವಿನಿಯೋಗ ನಂತರ ರಾತ್ರಿ 12 ಗಂಟೆಯಿಂದ ಗುರುವಾರ ಬೆಳಗಿನ ಜಾವ 5ರವರೆಗೂ ಪ್ರಸಿದ್ಧ ಕಲಾತಂಡದೊಂದಿಗೆ ಶ್ರೀ ಮಾರಿಕಾಂಬಾ ದೇವಿಯನ್ನು ವನಕ್ಕೆ ಬಿಡುವ ಮೂಲಕ ಜಾತ್ರೆ ಮುಕ್ತಾಯಗೊಂಡಿತು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/shivamogganews
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu