ಜುಲೈ 24, 25ರಂದು ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯುಗ್ಮಾ ಟೆಕ್ಫೆಸ್ಟ್ 2.0 ರಾಷ್ಟ್ರಮಟ್ಟದ ಎಐ ಹ್ಯಾಕಥಾನ್ ಸ್ಪರ್ಧೆ
ಶಿವಮೊಗ್ಗ | 23 ಜುಲೈ 2026 | ಡಿಜಿ ಮಲೆನಾಡು.ಕಾಂ
ಶಿವಮೊಗ್ಗ: ನಗರದ ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜಿನ ಇನ್ಫಾರ್ಮೇಷನ್ ಸೈನ್ಸ್ ವಿಭಾಗ ಹಾಗೂ ಐಇಇಇ ಕಂಪ್ಯೂಟರ್ ಸೊಸೈಟಿ ವಿದ್ಯಾರ್ಥಿ ಘಟಕದ ಸಹಯೋಗದಲ್ಲಿ ಜುಲೈ 24 ಮತ್ತು 25ರಂದು ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ‘ಯುಗ್ಮಾ ಟೆಕ್ಫೆಸ್ಟ್-2.0 ಮೇದದೃಷ್ಟಿ’ ರಾಷ್ಟ್ರಮಟ್ಟದ ಎಐ ಹ್ಯಾಕಥಾನ್ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ವೈ.ವಿಜಯಕುಮಾರ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ನವೋದ್ಯಮ ಚಿಂತನೆ, ಸಂಶೋಧನಾ ಮನೋಭಾವ ಹಾಗೂ ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶದಿಂದ ಹ್ಯಾಕಥಾನ್ ಆಯೋಜಿಸಲಾಗಿದೆ. ಎರಡು ದಿನ ನಿರಂತರವಾಗಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹ್ಯಾಕಥಾನ್ನ ಮೊದಲ ದಿನ ತಂಡಗಳಿಗೆ ಎರಡು ಪ್ರಮುಖ ವಿಭಾಗಗಳಲ್ಲಿ ಸವಾಲಿನ ವಿಷಯಗಳನ್ನು ನೀಡಲಾಗುತ್ತದೆ. ಮೊದಲ ವಿಭಾಗ, ‘ಕೃತಕ ಬುದ್ಧಿಮತ್ತೆ ಮೂಲಕ ವೈದ್ಯಕೀಯ ಚಿತ್ರಗಳ ಗುಣಮಟ್ಟ ಸುಧಾರಣೆ’ (AI for Medical Image Enhancement) ವಿಷಯದಲ್ಲಿ ಎಕ್ಸ್-ರೇ, ಎಂಆರ್ಐ, ಸಿಟಿ ಸ್ಕ್ಯಾನ್ ಮೊದಲಾದ ವೈದ್ಯಕೀಯ ಚಿತ್ರಗಳನ್ನು ಕೃತಕ ಬುದ್ಧಿಮತ್ತೆಯ ನೆರವಿನಿಂದ ವಿಶ್ಲೇಷಿಸಿ, ಟ್ಯೂಮರ್ ಪತ್ತೆ, ಅಂಗಾಂಗಗಳ ವಿಭಜನೆ, ದೇಹದ ಅಸಹಜತೆಗಳ ಗುರುತಿಸುವಿಕೆ ಹಾಗೂ ವರ್ಗೀಕರಣದ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಉಪಯುಕ್ತವಾಗುವ ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಸವಾಲು ನೀಡಲಾಗುತ್ತದೆ ಎಂದರು.
ಎರಡನೇ ವಿಭಾಗ ‘ವಸ್ತು ಗುರುತಿಸುವಿಕೆಗಾಗಿ ಕೃತಕ ಬುದ್ಧಿಮತ್ತೆ’ (AI for Object Recognition) ವಿಷಯದಲ್ಲಿ, ನೈಜ ಪರಿಸರದಲ್ಲಿ ವಸ್ತುಗಳನ್ನು ಪತ್ತೆಹಚ್ಚುವ ಹಾಗೂ ವರ್ಗೀಕರಿಸುವ ಬುದ್ಧಿವಂತ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಸವಾಲನ್ನು ಒಳಗೊಂಡಿದೆ. ಸ್ವಯಂಚಾಲಿತ ವಾಹನಗಳು, ಸ್ಮಾರ್ಟ್ ಸರ್ವೇಲೆನ್ಸ್, ಕೈಗಾರಿಕೆಗಳ ಗುಣಮಟ್ಟ ಪರಿಶೀಲನೆ ಸೇರಿದಂತೆ ವಿವಿಧ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ ಆಧಾರಿತ ಪರಿಹಾರಗಳನ್ನು ರೂಪಿಸಲಿದ್ದಾರೆ ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡುವ ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳ ರೂಪದಲ್ಲಿ ಒಟ್ಟು ₹2 ಲಕ್ಷ ನಗದು ಬಹುಮಾನ ವಿತರಿಸಲಾಗುವುದು ಎಂದರು.
ಜುಲೈ 24ರಂದು ಬೆಳಗ್ಗೆ 10ಕ್ಕೆ ಉದ್ಯಮಿ ಎಸ್. ರುದ್ರೇಗೌಡ ಉದ್ಘಾಟಿಸುವರು. ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಅಧ್ಯಕ್ಷತೆ ವಹಿಸುವರು. ಎನ್ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಡಾ. ಆರ್.ಜೆ.ರಾಘವೇಂದ್ರ ಉಪಸ್ಥಿತರಿರುವರು ಎಂದು ಹೇಳಿದರು.
ಜುಲೈ 25ರಂದು ಶನಿವಾರ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಧ್ಯಾಪಕಿ ಡಾ. ಅರ್ಚನಾ ಮತೂರ್ ಸಮಾರೋಪ ಭಾಷಣ ಮಾಡುವರು. ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ತಿಳಿಸಿದರು.
ಡಿಜಿಮಲೆನಾಡು.ಕಾಂ | ಇ-ಮೇಲ್ : digimalenadu@gmail.com
Like & Follow Facebook Page ” Digi Malenadu “
ಕಾರ್ಯಕ್ರಮದ ಸಂಘಟನಾ ಸಮಿತಿ ಸದಸ್ಯರಾದ ಡಾ. ಆರ್.ಜೆ.ರಾಘವೇಂದ್ರ, ಡಾ. ಎಂ.ಪಿ.ಪವನ್ ಕುಮಾರ್, ಡಾ. ಸಂಜೀವ್ ಕುಂಟೆ, ಪಿ.ಅರುಣ್ ಕುಮಾರ್, ಕೆ.ಎಂ. ಮನೀಷಾ ಹಾಗೂ ಎಸ್.ಎನ್. ವಿಶೃತ ರಾಣಿ ಸುದ್ದಿಗೋಷ್ಠಿಯಲ್ಲಿದ್ದರು.
ಫೇಸ್ ಬುಕ್ :www.facebook.com/digimalenadu
ನಮ್ಮ ಬಗ್ಗೆ :https://digimalenadu.com/about-us/
ಜೆಎನ್ಎನ್ ಕಾಲೇಜಿನ ಎಂಬಿಎ ವಿಭಾಗದಿಂದ ಉದ್ಯೋಗ ಮೇಳ, 80 ವಿದ್ಯಾರ್ಥಿಗಳಿಗೆ ಉದ್ಯೋಗ
