ಬದುಕಿನಲ್ಲಿ ಒಳ್ಳೆಯ ಮೌಲ್ಯಗಳ ಅನುಷ್ಠಾನ ಅತ್ಯಂತ ಅವಶ್ಯಕ

ಬದುಕಿನಲ್ಲಿ ಒಳ್ಳೆಯ ಮೌಲ್ಯಗಳ ಅನುಷ್ಠಾನ ಅತ್ಯಂತ ಅವಶ್ಯಕ

ಶಿವಮೊಗ್ಗ | 22 ಅಕ್ಟೋಬರ್ 2022 | ಡಿಜಿ ಮಲೆನಾಡು.ಕಾಂ

ಬದುಕಿನಲ್ಲಿ ಮೌಲ್ಯ ಅತ್ಯಂತ ಅಗತ್ಯ. ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಯಬೇಕು. ಮೌಲ್ಯವೇ ನಮ್ಮ ವ್ಯಕ್ತಿತ್ವದ ಪ್ರತಿರೂಪ ಎಂದು ನಾಡೋಜ ಡಾ. ಗೊ.ರು.ಚನ್ನಬಸಪ್ಪ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ವಿಚಾರ ಸಂಕಿರಣ ಹಾಗೂ ಶ್ರೀ ನಂಜಪ್ಪ ಶರಣ ಸಾಹಿತ್ಯ ದತ್ತಿ ಕಾರ್ಯಕ್ರಮದಲ್ಲಿ “ಮೌಲಿಕ ಬದುಕು” ವಿಷಯ ಕುರಿತು ಮಾತನಾಡಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಮೌಲ್ಯ ಎಂಬುದು ಅಮೂರ್ತ ಭಾವನೆ. ಅನುಭವ ಆಚರಣೆಗೆ ಸಂಬಂಧಿಸಿದ್ದು, ಬದುಕಿನ ಬ್ರಹ್ಮ ಮನುಷ್ಯನೇ, ದುರಾದೃಷ್ಟ ಆತನಿಗೆ ಇನ್ನೂ ಅರ್ಥವಾಗಿಲ್ಲ. ಬದುಕಿನ ಅರಿವೇ ಆತನಿಗೆ ಆಗುತ್ತಿಲ್ಲ. ಕೂತೂಹಲ ಮನೋಭಾವದಿಂದ ಮನುಷ್ಯ ಅದರ ಹುಡುಕಾಟದ ಹಾದಿಯಲ್ಲಿ ಇದ್ದಾನೆ ಎಂದು ತಿಳಿಸಿದರು.

ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ, ವಾಣಿಜ್ಯ, ವ್ಯಕ್ತಿ, ಆಧ್ಯಾತ್ಮ ಸೇರಿದಂತೆ ಮನುಷ್ಯನಿಗೆ ಸಂಬಂಧಪಟ್ಟ ಎಲ್ಲಕ್ಷೇತ್ರಗಳಿಗೂ ಮೌಲ್ಯ ತಳುಕು ಹಾಕಿಕೊಂಡಿದೆ. ಮೌಲ್ಯ ಭಾಷಣಕ್ಕೆ, ಮುದ್ರಣಕ್ಕೆ ಮಾತ್ರ ಸೀಮಿತವಾಗಿದೆ. ಬದುಕಿನಲ್ಲಿ ಒಳ್ಳೆಯ ಮೌಲ್ಯಗಳ ಅನುಷ್ಠಾನ ತರುವುದು ಅತ್ಯಂತ ಅವಶ್ಯಕ ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಚನ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ವಚನ ಸಾಹಿತ್ಯವು ಮಾನವೀಯ ಸಂಸ್ಕೃತಿಯ ಪೋಷಣೆ ಮಾಡುತ್ತಿದೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಪೂರಕವಾಗಿ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದು ಹೇಳಿದರು.

ಬಸವಕೇಂದ್ರದ ಡಾ.  ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್‌ ವತಿಯಿಂದ ನಡೆಯುತ್ತಿರುವ ದತ್ತಿ ಉಪನ್ಯಾಸಗಳು ಜ್ಞಾನ ಭಂಡಾರದ ಕಣಜವಾಗಿದೆ. ಅಪಾರ ಜೀವನ ಅನುಭವ ಹೊಂದಿರುವ ಡಾ. ಗೊ.ರು.ಚನ್ನಬಸಪ್ಪ ಅವರ ಉಪನ್ಯಾಸ ಇಂದಿನ ಯುವಪೀಳಿಗೆಗೆ ಮಾರ್ಗದರ್ಶನವಾಗಿದೆ ಎಂದು ಹೇಳಿದರು.

ಮೌಲ್ಯ ಮಹತ್ವ ಕಳೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಹಿರಿಯರ ಮಾತುಗಳು ಮೌಲ್ಯಗಳ ಪುನರುತ್ಥಾನಕ್ಕೆ ಕಾರಣವಾಗುತ್ತದೆ. ಪ್ರತಿಯೊಬ್ಬರು ಒಳ್ಳೆಯ ಸಂಸ್ಕಾರಗಳಿಂದ ಜೀವನ ಮುನ್ನಡೆಸಬೇಕು ಎಂದು ತಿಳಿಸಿದರು.

ಕದಳಿ ಮಹಿಳಾ ವೇದಿಕೆ ಸದಸ್ಯರು ವಚನ ಗಾಯನ ನಡೆಸಿಕೊಟ್ಟರು. ವಿಧಾನ ಪರಿಷತ್‌ ಸದಸ್ಯ ಎಸ್‌.ರುದ್ರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎನ್‌.ಮಹಾರುದ್ರ, ನಂಜಪ್ಪ ಆಸ್ಪತ್ರೆಯ ಡಿ.ಜಿ.ಬೆನಕಪ್ಪ, ಬಸವಲಿಂಗಪ್ಪ, ಡಿ.ವಿ.ಅಮೃತ್, ಪ್ರಧಾನ ಕಾರ್ಯದರ್ಶಿ ಬಾರಂದೂರು ಪ್ರಕಾಶ್‌, ಚನ್ನಬಸಪ್ಪ ನ್ಯಾಮತಿ, ಶಿವಯೋಗಿ ಹಂಚಿನಮನೆ ಉಪಸ್ಥಿತರಿದ್ದರು.

ಅಕ್ಟೋಬರ್‌ 22ರ ಶನಿವಾರದ ಕಾರ್ಯಕ್ರಮ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿರುವ ಎರಡನೇ ದಿನದ ಜಿಲ್ಲಾ ವಿಚಾರ ಸಂಕಿರಣದಲ್ಲಿ ಅ. 22ರ ಸಂಜೆ 6ಕ್ಕೆ ಶ್ರೀಮತಿ ನಾಗರತ್ನಮ್ಮ ಶ್ರೀ ವೈ.ಆರ್.ಪರಮೇಶ್ವರಪ್ಪ ದತ್ತಿ ಕಾರ್ಯಕ್ರಮದಲ್ಲಿ ನಾಡೋಜ ಡಾ. ಗೊ.ರು.ಚನ್ನಬಸಪ್ಪ ಅವರು “ನೀನೂ ಇಲ್ಲ, ನಾನೂ ಇಲ್ಲ” ವಿಷಯ ಕುರಿತು ಉಪನ್ಯಾಸ ನೀಡುವರು. ಉದ್ಯಮಿ ವೈ.ಪಿ.ಶಿವಕುಮಾರ್‌, ಕೈಗಾರಿಕೋದ್ಯಮಿ ಎಸ್.ಆರ್.ಹರ್ಷ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಜನಪದ ಗಾಯಕ ಕೆ.ಯುವರಾಜ ಅವರಿಗೆ ಕೆ.ಆರ್.ಲಿಂಗಪ್ಪ ಜಾನಪದ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರೊ. ಮಲೆಯೂರು ಗುರುಸ್ವಾಮಿ ಅಧ್ಯಕ್ಷತೆ ವಹಿಸುವರು.

digimalenadu

ಶಿವಮೊಗ್ಗ
error: Content is protected !!