ಸಮಾಜದ ಅಗತ್ಯಗಳಿಗೆ ಸ್ಪಂದಿಸುವ ಎಐ ಪರಿಹಾರಗಳನ್ನು ರೂಪಿಸಿ, ಯುಗ್ಮಾ ಟೆಕ್‌ಫೆಸ್ಟ್ 2.0
ಶಿವಮೊಗ್ಗ | 25 ಜುಲೈ 2026 | ಡಿಜಿ ಮಲೆನಾಡು.ಕಾಂ
ಶಿವಮೊಗ್ಗ: ಯುವ ತಂತ್ರಜ್ಞರು ಸಮಾಜದ ನೈಜ ಸಮಸ್ಯೆಗಳನ್ನು ಗುರುತಿಸಿ, ಜನಸಾಮಾನ್ಯರ ಜೀವನಮಟ್ಟವನ್ನು ಸುಧಾರಿಸುವ ನಾವೀನ್ಯ ಎಐ ಆಧಾರಿತ ಪರಿಹಾರಗಳನ್ನು ರೂಪಿಸಬೇಕು ಎಂದು ಉದ್ಯಮಿ ಎಸ್. ರುದ್ರೇಗೌಡ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu
ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ ಇನ್‌ಫಾರ್ಮೇಷನ್ ಸೈನ್ಸ್ ವಿಭಾಗ ಹಾಗೂ ಐಇಇಇ ಕಂಪ್ಯೂಟರ್ ಸೊಸೈಟಿ ವಿದ್ಯಾರ್ಥಿ ಘಟಕದ ಸಹಯೋಗದಲ್ಲಿ ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ಆಯೋಜಿಸಿದ್ದ ‘ಯುಗ್ಮಾ ಟೆಕ್‌ಫೆಸ್ಟ್-2.0 ಮೇದದೃಷ್ಟಿ’ ರಾಷ್ಟ್ರಮಟ್ಟದ ಎಐ ಹ್ಯಾಕಥಾನ್ ಉದ್ಘಾಟಿಸಿ ಮಾತನಾಡಿದರು.
ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭವಿಷ್ಯದ ನವೋದ್ಯಮಿಗಳಾಗಿ, ತಂತ್ರಜ್ಞಾನ ನಾಯಕರಾಗಿ ಬದಲಾಗಬೇಕು. ಅಂತಹ ಬದಲಾವಣೆಗೆ ಹ್ಯಾಕಥಾನ್ ಅದ್ಭುತ ವೇದಿಕೆ. ಭಾರತವು ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಅತ್ಯಂತ ಗಮನಾರ್ಹ ಸಾಧನೆಯನ್ನು ಮಾಡಿದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ತಿಳಿಸಿದರು.
1970ರ ದಶಕದ ಮಧ್ಯಭಾಗದಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಆರಂಭವಾದ ದಿನದಿಂದ ಇಂದಿನ ಕೃತಕ ಬುದ್ಧಿಮತ್ತೆ ಯುಗದವರೆಗೆ ನಮ್ಮ ದೇಶವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿದೆ. ಇಂದು ಎಐ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದರೂ ಪ್ರತಿಭಾವಂತ ಸಾಫ್ಟ್‌ವೇರ್ ವೃತ್ತಿಪರರ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದ್ದು, ನಿಮ್ಮಂತಹ ಯುವ ನವೋದ್ಯಮಿಗಳಿಗೆ ಅಪಾರ ಅವಕಾಶಗಳು ತೆರೆದುಕೊಳ್ಳುತ್ತಿವೆ ಎಂದರು.
ಜಗತ್ತಿನ ಅತಿದೊಡ್ಡ ಗ್ರಾಹಕ ಮಾರುಕಟ್ಟೆಗಳಲ್ಲಿ ಭಾರತವೂ ಒಂದಾಗಿದೆ. ನಮ್ಮ ದೇಶದಲ್ಲಿಯೇ ಅಪಾರ ಅವಕಾಶಗಳಿವೆ. ಆದ್ದರಿಂದ ನಿಮ್ಮ ಜ್ಞಾನ, ಕೌಶಲ್ಯ ಮತ್ತು ಸೃಜನಶೀಲತೆಯನ್ನು ಭಾರತದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಳಸಿಕೊಳ್ಳಿ. ನಿಮ್ಮಲ್ಲಿ ಹಲವರಿಗೆ ವಿದೇಶಗಳಲ್ಲಿ ಕೆಲಸ ಮಾಡುವ ಅವಕಾಶಗಳು ದೊರೆಯಬಹುದು. ಆದರೆ ನಿಮ್ಮ ಪ್ರತಿಭೆಯಿಂದ ನಮ್ಮ ದೇಶದಲ್ಲಿಯೇ ಮಹತ್ತರ ಬದಲಾವಣೆಗಳನ್ನು ತರಲು ಸಾಧ್ಯ ಎಂಬುದನ್ನು ಎಂದಿಗೂ ಮರೆಯಬೇಡಿ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಯುಗ್ಮಾ ಎಂಬ ಶೀರ್ಷಿಕೆಯು ಕೂಡುವಿಕೆಯ ಸಂಕೇತವಾಗಿದೆ. ಪ್ರಾಯೋಗಿಕ ಜ್ಞಾನ ನೀಡುವಂತಹ ಸಾಧಕರ ಒಡನಾಟದಿಂದ ನಮ್ಮಲ್ಲಿ ಮತ್ತಷ್ಟು ಜ್ಞಾನ ವಿಕಸನಗೊಳ್ಳಲಿದೆ. ಎಐ ಎಲ್ಲ ರಂಗದಲ್ಲಿ ಅಳವಡಿಸಿಕೊಳ್ಳಲಾಗಿದೆ ಮತ್ತು ಪರಿಣಾಮಕಾರಿ ಫಲಿತಾಂಶ ಪಡೆಯಲಾಗುತ್ತಿದೆ. ಆದರೆ ಎಐ ಮನುಷ್ಯನಿಗೆ ಭಸ್ಮಾಸುರನಂತೆ ಕಾಡದಿರಲಿ. ಆವಿಷ್ಕಾರಗಳು ಬದುಕಿಗೆ ಪೂರಕವಾಗಿರಬೇಕು ಎಂದು ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಹ್ಯಾಕಥಾನ್ ಎನ್ನುವುದು ಕೇವಲ ಒಂದು ಸ್ಪರ್ಧೆಯಲ್ಲ. ತರಗತಿಯಲ್ಲಿ ಕಲಿತ ಜ್ಞಾನವನ್ನು ನೈಜ ಜೀವನದ ಸಮಸ್ಯೆಗಳಿಗೆ ಅನ್ವಯಿಸುವ ಸೇತುವೆಯಾಗಿದೆ ಎಂದು ತಿಳಿಸಿದರು.
ಡಿಜಿಮಲೆನಾಡು.ಕಾಂ | ಇ-ಮೇಲ್ : digimalenadu@gmail.com
Like & Follow Facebook Page ” Digi Malenadu “
ಕಾಲೇಜಿನ ಪ್ರಾಚಾರ್ಯ ಡಾ. ವೈ.ವಿಜಯಕುಮಾರ್, ಇನ್‌ಫಾರ್ಮೇಷನ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ಆರ್.ಜೆ, ಐಇಇಇ ಕಂಪ್ಯೂಟರ್ ಸೊಸೈಟಿ ವಿದ್ಯಾರ್ಥಿ ಘಟಕದ ಸಂಯೋಜಕ ವಿರೇಶ್.ಎಚ್.ಟಿ ಉಪಸ್ಥಿತರಿದ್ದರು. ಸಂಘಟನಾ ಸಮಿತಿ ಸದಸ್ಯ ಡಾ. ಪವನ್ ಕುಮಾರ್ ಎಂ.ಪಿ ಇದ್ದರು. ವಿವಿಧ ರಾಜ್ಯಗಳ 150ಕ್ಕೂ ಹೆಚ್ಚು ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಭಾಗವಹಿಸಿತ್ತು.
ಫೇಸ್ ಬುಕ್ :www.facebook.com/digimalenadu
ನಮ್ಮ ಬಗ್ಗೆ :https://digimalenadu.com/about-us/
